ಫ್ರಾನ್ಸಿಸ್ ಆಫ್ ಆಸೀಸಿ
	1182-1226. ಕ್ರೈಸ್ತ ಸಂತ. ಇಟಲಿಯ ಪುರಾತನ ಕವಿಗಳಲ್ಲೊಬ್ಬ. ಫ್ರಾನ್ಸಿಸ್‍ಕನ್ ಪಂಥದ ಜನಕ. ತನ್ನ ಅನನ್ಯ ದೈವಭಕ್ತಿ ಲೋಕಕಾರಣ್ಯ ಮಾನವ ಅನುಕಂಪಗಳನ್ನು ಸರಳಸುಂದರ ಭಕ್ತಿಗೀತೆಗಳ ಮೂಲಕ ಲೋಕಕ್ಕೆ ಸಾರಿದ ಮಹಾಜ್ಞಾನಿ. ಇವನ ಜೀವನಕ್ಕೆ ಸಂಬಂಧಿಸಿದ ಹಲವಾರು ಸುಂದರ ದಂತಕಥೆಗಳಿವೆ. ಸೂರ್ಯನನ್ನು ಕುರಿತು ಈತ ರಚಿಸಿದ ಸ್ತೋತ್ರ ಇಟಲಿಯ ಆದಿಕಾವ್ಯವೆನಿಸಿದೆ. ಇದರಲ್ಲಿ ಕವಿ, ಲೋಕದ ಮೂಲಭೂತ ಶಕ್ತಿಗಳನ್ನೂ ಮಾನವ ಜೀವನಕ್ಕೆ ಅಮೃತತ್ವವನ್ನು ತಂದುಕೊಡುವ ಸಾವು ನೋವುಗಳನ್ನೂ ಸೃಜಿಸಿದ ಸೃಷ್ಟಿಕರ್ತನನ್ನೂ ಮುಕ್ತಕಂಠದಿಂದ ಹಾಡಿಹೊಗಳಿದ್ದಾನೆ. ಇವನು ತೋರಿಸಿಕೊಟ್ಟ ಭಕ್ತಿಮಾರ್ಗವನ್ನನುಸರಿಸಿ ಫ್ರಾನ್ಸಿಸ್ಕನ್ ಪಂಥದ ಬೇರೆ ಬೇರೆ ಕವಿಗಳು ಅನೇಕ ಭಕ್ತಿಗೀತೆಗಳನ್ನು ರಚಿಸಿದರು.

ಅಂದಿನ ಕ್ಯಾಥೊಲಿಕ್ ಪ್ರಪಂಚ ಮತಾಂಧತೆ ಅಸಹನೆ ಮುಂತಾದ ಸಂಕುಚಿತ ಪ್ರವೃತ್ತಿಗಳಿಂದ ತುಂಬಿ ತುಳುಕುತ್ತಿದ್ದಾಗ ಪೂರ್ವದೇಶಗಳಲ್ಲಿ ಸಹಜವಾಗಿ ಹರಡಿದ್ದ ಲೋಕಕಾರುಣ್ಯ, ಮಾನವೀಯತೆ ಸೋದರಭಾವನೆಗಳನ್ನು ಈ ಕವಿ ಸೂಫೀ ಕವಿಗಳ ಮೂಲಕ ಪಡೆದು ಇಟಲಿಯಲ್ಲಿ ಹರಡಿನೆಂದು ವಿದ್ವಾಂಸರ ಅಭಿಪ್ರಾಯ.
ಇವನ ಧ್ಯೇಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳಲು ಸಂಕಲ್ಪ ತೊಟ್ಟ ವಿರಕ್ತರನ್ನು ಫ್ರಾನ್ಸಿಸ್ಕನ್ಸ್ ಎನ್ನುತ್ತಾರೆ. ಇವನ ಪಂಥಕ್ಕೆ ಪೋಪರ ಬೆಂಬಲವಿತ್ತು.
ಪಶುಪ್ರಾಣಿಗಳೆನ್ನದೆ ಎಲ್ಲ ಜೀವಿಗಳಲ್ಲೂ ಅನುಕಂಪ ತೋರಬೇಕೆನ್ನುವುದು ಈ ವಾದದ ತಿರುಳು.
	(ಎಚ್.ಕೆ.ಆರ್.; ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ